ವಿಶ್ವಾಸ, ಅದಕ್ಕೆ ದ್ರೋಹ ಮಾಡದಿರಿ.

ತಂದೆಯಾದವನು ರಾತ್ರಿ, ಹಗಲು ದುಡಿದು ಒಂದೊಂದು ಪೈಸೆ ಕೂಡಿ ಇಟ್ಟು ಮಗಳಿಗಾಗಿ ಒಂದೊಂದೇ ಬಂಗಾರದ ಆಭರಣ ಮಾಡಿಸಿ ಅದನ್ನು ಕಪಾಟಿನಲ್ಲಿ ಇಟ್ಟು ಕಣ್ಣಿನಲ್ಲಿ ಒಂದು ತಣ್ಣನೆಯ ತೃಪ್ತಿ ಪಡುತ್ತಾನಲ್ಲ, ಅದಕ್ಕೆ ಬೆಲೆ ಕಟ್ಟಲು ಆಗುತ್ತಾ, ಮಗಳು ಡಾಕ್ಟರೋ, ಇಂಜಿನಿಯರೋ ಆಗಲಿ ಎಂದು ಹೊರಗೆ ಹೆಚ್ಚುವರಿ ದುಡಿದು ದಣಿದು ಬಂದು ಮಗಳು ತನ್ನ ಕೋಣೆಯಲ್ಲಿ ಓದುತ್ತಾ ಕುಳಿತಿದ್ದಾಳಲ್ಲ ಎಂದು ವಿಶ್ವಾಸದಿಂದ ಇಣುಕಿ ಸಂತೃಪ್ತಿ ಪಡುತ್ತಾನಲ್ಲ, ಅದನ್ನು ತುಲನೆ ಮಾಡಲು ಅಗುತ್ತಾ, ಮಗಳು ಶಾಲೆಯಲ್ಲಿ ಫ್ಯಾನ್ಸಿ ಡ್ರೆಸ್ ನಲ್ಲಿ ಭಾಗವಹಿಸಬೇಕು, ಸ್ಕೂಲ್ ಟ್ರಿಪ್ಪಿಗೆ ಹೋಗಬೇಕು ಹಣ ಬೇಕು ಎಂದು ಹೇಳುವಾಗ ತನ್ನ ಸಂಜೆಗಳ ಚಾ ತಿಂಡಿಗೆ ಇಟ್ಟ ಹಣವನ್ನು ಅದಕ್ಕೆ ಕೊಟ್ಟು ತಾನು ನೀರು ಕುಡಿದು ಸಾಕು ಅಂದುಕೊಳ್ಳುತ್ತಾನಲ್ಲ ಅದಕ್ಕೆ ಸಮ ಬೇರೆ ಉಂಟೆ. ಇನ್ನೇನೂ ಮಗಳಿಗೆ ಮದುವೆಯ ವಯಸ್ಸು ಹತ್ತಿರ ಬಂದಾಗ ಆಕೆಗೆ ಒಳ್ಳೆಯ ಗಂಡ ಸಿಗುವ ತನಕ ಅದೇ ಗುಂಗಿನಲ್ಲಿ ತನ್ನ ರಾತ್ರಿಗಳ ನಿದ್ರೆಯನ್ನು ಕನವರಿಕೆಯಲ್ಲಿ ಕಳೆದು ಬೆಳಿಗ್ಗೆ ಎಳುವಾಗ ತಲೆ ಭಾರ ಆದರೂ ಕೆಲಸಕ್ಕೆ ಹೊರಡುತ್ತಾನಲ್ಲ, ಅದಕ್ಕೆ ಏನೇನ್ನುವುದು. ತಾಯಿಯ ಪ್ರೀತಿ ಕಾಣುತ್ತದೆ, ತಂದೆಯ ಪ್ರೀತಿ ತೋರುತ್ತದೆ ಎನ್ನುವ ನಡುವೆ ಹೆಣ್ಣುಮಗಳೊಂದು ಒಂದು ಸರಿ ರಾತ್ರಿಯಲ್ಲಿ ಅಂತಹ ತಂದೆಯ ವಾತ್ಸಲ್ಯವನ್ನು ಕೂಡ ದಿಕ್ಕರಿಸಿ ನಿನ್ನೆ ಮೊನ್ನೆ ತನ್ನ ಕೈ ಹಿಡಿದು ಐ ಲವ್ ಯೂ ಎಂದವನ ಹಿಂದೆ ಹೋದರೆ ಆ ತಂದೆಗೆ ಹೇಗಾಗಬೇಡಾ. ತಾಯಿಯಾದರೆ ರಂಪಾಟ ಮಾಡಿ ಅತ್ತು ಕರಗಿ ದು:ಖವನ್ನು ತೋರಿಸಬಲ್ಲಳು. ಆದರೆ ತಂದೆ ಅಷ್ಟೂ ನೋವನ್ನು ಎದೆಯಲ್ಲಿ ಇಟ್ಟು ಕೊರಗುತ್ತಾನೆ. ತಾಯಿಯಾದರೂ ಮಗಳು ನ್ಯಾಯಾಲಯದಲ್ಲಿಯೋ, ಸ್ಟೇಶನ್ನಿನಲ್ಲಿಯೋ ಮುಂದೆ ಸಿಕ್ಕಿದರೆ ಅವಳ ಕೈಕಾಲು ಹಿಡಿದು ಒತ್ತಾಯಿಸಬಲ್ಲಳು. ಆದರೆ ತಂದೆ ದೂರದಲ್ಲಿ ನಿಂತು ನಾನು ಮೂರು ವರ್ಷದ ಮಗುವನ್ನು ದೇವಸ್ಥಾನಕ್ಕೆ ಕರೆದುಕೊಂಡು ಅಕ್ಕಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದ್ದು ಇವಳಿಗೆನಾ ಎಂದು ಕಣ್ಣರೆಪ್ಪೆಯ ನಡುವೆನೆ ನೀರಾಗುತ್ತಾನೆ. ಶ್ರುತಿ, ಆದಿಶಾ ನಂತಹ ಹೆಣ್ಣುಮಕ್ಕಳಿಗೆ ಅದೆಲ್ಲ ಅರ್ಥವಾಗುತ್ತದಾ? ನಂತರ ತಾವು ಪ್ರೀತಿಸಿದ ಹುಡುಗ ಗಾಂಜಾ ಕೇಸಿನಲ್ಲಿ ಒಳಗೆ ಬಿದ್ದವ, ಕಳ್ಳತನದ ಕೇಸಿನಲ್ಲಿ ಶಿಕ್ಷೆ ಆದವ ಎಂದು ಗೊತ್ತಾದಾಗ ಮತ್ತೆ ತಾಯಿ ಮನೆಗೆ ಹಿಂತಿರುಗುವ ಹುಡುಗಿಯನ್ನು ತಾಯಿ ಪೊರಕೆಯಲ್ಲಿ ಪೂಜೆ ಮಾಡಿ ಕೋಪ ತೀರಿಸಿಕೊಳ್ಲಬಹುದು. ಆದರೆ ತಂದೆ ಅದನ್ನು ಕೂಡ ಮಾಡುವುದು ಕೂಡ ಕಡಿಮೆ. ಅದರರ್ಥ ತಂದೆಗೆ ಮಗಳು ಓಡಿ ಹೋದದ್ದು ಬೇಸರ ಮೂಡಿಸಿಲ್ಲ ಅಂತ ಅರ್ಥವಲ್ಲ. ತಂದೆ ತನ್ನ ಎದೆಗೂಡಿನಲ್ಲಿ ನೋವನ್ನು ಬಚ್ಚಿಡುತ್ತಾನೆ. ವೈದ್ಯಕೀಯ ಶಾಸ್ತ್ರದ ಪ್ರಕಾರ ನೋವನ್ನು ಹೊರಗೆ ಹಾಕದೇ ಒಳಗೆನೆ ಅನುಭವಿಸುವವರಿಗೆ ಹೆಚ್ಚು ಹೃದಯಾಘಾತ ಆಗುತ್ತದೆ ಎನ್ನಲಾಗುತ್ತದೆ. ತುಲನೆ ಮಾಡಿದರೆ ಹೃದಯಾಘಾತದಿಂದ ಸಾವನ್ನಪ್ಪುವುದರಲ್ಲಿ ಗಂಡಸರ ಸಂಖ್ಯೆ ಜಾಸ್ತಿ. ಆದ್ದರಿಂದ ಮೊನ್ನೆ ನೋಡಿದ ನಿನ್ನೆ ಸಿಕ್ಕಿದ ಇವತ್ತು ಬೆಳಿಗ್ಗೆ ನಕ್ಕಿದ ಹುಡುಗನೊಂದಿಗೆ ನಾಳೆ ಓಡಿ ಹೋಗುವ ಪ್ಲಾನ್ ಮಾಡುವ ಹುಡುಗಿಯರೇ ಒಂದು ವಿಷಯ ನೆನಪಿಡಿ. ನೀವು ಆಗಸದಿಂದ ನೇರವಾಗಿ ಭೂಮಿಗೆ ಬಿದ್ದವರಲ್ಲ. ನಿಮ್ಮನ್ನು ಚಳಿ ಆದಾಗ ಕಂಬಳಿ ಹೊದ್ದು ಮಲಗಿಸಿದ, ಸೆಕೆ ಆದಾಗ ಗಾಳಿ ಹಾಕಿದ, ಕೆಮ್ಮಿದಾಗ ವಿಕ್ಸ್ ಹಚ್ಚಿದ, ವಾಂತಿ ಬಂದಾಗ ಕೈ ಹಿಡಿದ, ಹಸಿದಾಗ ಬಡಿಸಿದ, ಕಾಲಿಗೆ ಶೂ ಹಾಕಿದ, ನಿಮ್ಮ ಬ್ಯಾಗ್ ಹಿಡಿದು ಶಾಲೆ ತನಕ ನಡೆದುಬಂದ, ನಿಮಗೆ ಪೆನ್ಸಿಲ್ ನಿಂದ ಹಿಡಿದು ಸ್ಕೂಟರ್ ತನಕ ತೆಗೆಸಿಕೊಟ್ಟ ಎರಡು ಜೀವಗಳು ನಿಮಗಾಗಿ ಕಾಯುತ್ತಿರುತ್ತವೆ ಎಂದು ನಿಮಗೆ ಗೊತ್ತಿರಲಿ. ಒಂದು ಖಾಲಿ ಜಾಗ ಇದ್ದರೆ ಅದು ಎಲ್ಲಿ ಕೂಡ ಓಡಿ ಹೋಗುವುದಿಲ್ಲ ಎಂದು ಗೊತ್ತಿದ್ದರೂ ಅದರ ಮಾಲೀಕರು ಅದಕ್ಕೆ ಬೇಲಿ ಹಾಕಿ ಇಡುತ್ತಾರೆ. ಆದರೆ ನಿಮಗೆ ಬೇಲಿ ಹಾಕಿಲ್ಲ ಯಾಕೆಂದರೆ ಅದು ವಿಶ್ವಾಸ, ಅದಕ್ಕೆ ದ್ರೋಹ ಮಾಡದಿರಿ.

Leave a Reply

Your email address will not be published. Required fields are marked *

Skip to toolbar