ಕಲಾಸೇವಕ ಉಳ್ಳೂರು ಶಂಕರ ದೇವಾಡಿಗ.

News by : ‎ಶಂಕರ್ ಸಾಗರ‎ :

ಕುಂದಾಪುರ ತಾಲೂಕಿನ 11ನೇ ಉಳ್ಳೂರಿನ ಚಂದ್ರಾವತಿ ಮತ್ತು ನಾರಾಯಣ ದೇವಾಡಿಗರ ಒಂಬತ್ತುಮಂದಿ ಮಕ್ಕಳಲ್ಲಿ ಮೂರನೆಯವರಾದ ಶಂಕರ ದೇವಾಡಿಗ ಪ್ರಾಥಮಿಕ ಶಿಕ್ಷಣಕ್ಕೆ ತಿಲಾಂಜಲಿ ನೀಡಿ ಮೊದಲುಆಯ್ಕೆ ಮಾಡಿಕೊಂಡಿದ್ದು ಹೊಲಿಗೆ ವೃತ್ತಿಯನ್ನು. ತನ್ನ ಕಸಬಿನೊಂದಿಗೆ ಖ್ಯಾತ ಭಾಗವತರಾದ ಹೆರಂಜಾಲು ಗೋಪಾಲ ಗಾಣಿಗರಿಂದ ಹೆಜ್ಜೆ ಹಾಗೂ ನರ್ತನವನ್ನು ಕಲಿತು ತನ್ನ 15ನೇ ವಯಸ್ಸಿಗೆ ಮಾರಣಕಟ್ಟೆ ಮೇಳದಲ್ಲಿ ಗೆಜ್ಜೆಕಟ್ಟಿ ಕೀರ್ತಿಶೇಷ ಮುತ್ತಯ್ಯ ಹೆಗ್ಡೆಯವರ ಯಜಮಾನಿಕೆಯಲ್ಲಿ ನಿರಂತರ ಒಂಬತ್ತು ವರ್ಷಗಳ ಕಾಲ ಯಕ್ಷಗಾನ ತಿರುಗಾಟ ನಡೆಸಿದರು.

ಸಾಂಪ್ರದಾಯಿಕ ಯಕ್ಷಗಾನ ಚೌಕಟ್ಟಿನ ಒಳಗೆ ಹಂತಹಂತವಾಗಿ ಬೆಳೆದು ತನ್ನದೇ ಆದ ಶೈಲಿಯನ್ನು ರೂಪಿಸಿಕೊಂಡರು. ಆ ಬಳಿಕ ಶಿರಸಿ, ಬಗ್ವಾಡಿ, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ತಿರುಗಾಟ ನಡೆಸಿದ ಬಳಿಕ ಪ್ರಸ್ತುತ ಸಾಲಿಗ್ರಾಮ ಮೇಳದಲ್ಲಿಕಳೆದ ಆರು ವರ್ಷಗಳಿಂದ ಕಲಾಸೇವೆಗೈಯುತ್ತಿದ್ದಾರೆ. ಈಗ ಅವರಿಗೆ ಯಕ್ಷಮಾತೆಯ ಸೇವೆಯಲ್ಲಿ ಇಪ್ಪತ್ತೈದು ವರ್ಷಗಳನ್ನು ಪೂರೈಸಿದ ಸಂಭ್ರಮ.ಪೌರಾಣಿಕ ಹಾಗೂ ನವ್ಯ ಪ್ರಸ೦ಗಗಳಿಗೂ ಸೈಸರಳ, ಸಜ್ಜನಿಕೆಯವರಾದ ಶಂಕರ ದೇವಾಡಿಗರು ತೆರೆಮರೆಯ ಕಾಯಿಯಂತಿರುವ ನಿರಂತರ ಹಸನ್ಮುಖೀ ಹಾಗೂ ಚುರುಕಿನ ಕಲಾವಿದ.

ಪೌರಾಣಿಕ ಸತ್ವಗಳನ್ನು ಮೈಗೂಡಿಸಿಕೊಂಡು ರಂಗಸ್ಥಳದಲ್ಲಿ ಹಿತಮಿತವಾಗಿ ಪ್ರಸಂಗದ ಮೌಲ್ಯಗಳನ್ನು ಎತ್ತಿಹಿಡಿದು ಅಭಿನಯಿಸುವ ಅವರ ಸುಭದ್ರೆ, ತಾರಾವಳಿ, ಮಾಲಿನಿ, ಚಂದ್ರಾವಳಿ, ಚಿತ್ರಾಂಗದೆ, ಸೀತೆ, ದಮಯಂತಿ ಮುಂತಾದ ಪಾತ್ರಗಳು ಯಶಸ್ವೀ ಪ್ರಸ್ತುತಿ ಎನಿಸಿವೆ. ರಂಗಪಂಚಮಿಯ ಶಶಿರೇಖೆ, ಪ್ರತಿಜ್ಞಾ ಪಲ್ಲವಿಯ ಬೆಳ್ಳಿ, ನೀಲ ಮೇಘ ಶ್ಯಾಮದನೀಲವೇಣಿ, ಶಿವಾನಿ ಭವಾನಿಯ ಶಿವಾನಿ, ಸಾವನಿ-ಪಾವನಿಯಲ್ಲಿ ಹಾಸ್ಯಪಾತ್ರವಾದ ಸರಸಿ, ಅಗ್ನಿಚರಿತ್ರಾದ ಲಕುಮಿ, ನಾಗವಲ್ಲಿಯ ಪಂಚಮಿ, ಶಿವರಂಜನಿಯ ನೇತ್ರಾ ಮೊದಲಾದ ಪಾತ್ರಗಳಲ್ಲಿ ಅಭಿನಯಿಸಿ ಹೊಸ ಕಾಲದ ಪ್ರಸಂಗಗಳ ಪಾತ್ರಗಳಿಗೂ ತಾವು ಸೈ ಎಂದು ತೋರಿಸಿಕೊಟ್ಟಿದ್ದಾರೆ.

ದಿಗ್ಗಜರ ಒಡನಾಟ
ಜಲವಳ್ಳಿ ವೆಂಕಟೇಶ್ವರ ರಾವ್‌, ಚಿಟ್ಟಾಣಿ ರಾಮಚಂದ್ರ ಹೆಗಡೆ, ನಗರ ಜಗನ್ನಾಥ ಶೆಟ್ಟಿ, ಬಳ್ಕೂರು ಕೃಷ್ಣ ಯಾಜಿ, ಸುಬ್ರಹ್ಮಣ್ಯ ಧಾರೇಶ್ವರ, ಭಾಸ್ಕರ ಜೋಶಿ, ರಾಮ ನಾಯಿರಿ, ಗೋಪಾಲ ಆಚಾರಿ, ಕುಂಜಾಲು ರಾಮಕೃಷ್ಣ, ಮೂರೂರು ವಿಷ್ಣು ಭಟ್‌ ಮುಂತಾದ ಮೇರು ಕಲಾವಿದರೊಂದಿಗೆ ಪಾತ್ರ ನಿರ್ವಹಿಸಿದ್ದು ಶಂಕರ ದೇವಾಡಿಗರ ಹೆಮ್ಮೆಯ ಅನುಭವ. ಪೌರಾಣಿಕ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಲು ಇಚ್ಛಿಸುವ ಇವರು ಭಾಗವತ ರಾಘವೇಂದ್ರ ಮಯ್ಯ ಮತ್ತು ಸುರೇಶ್‌ ಶೆಟ್ಟರೊಂದಿಗೆ ಅತಿ ಹೆಚ್ಚು ತಿರುಗಾಟ ಪೂರೈಸಿದ್ದಾರೆ.ಯಕ್ಷಗಾನ ಕ್ಷೇತ್ರಕ್ಕೆ ಬಹಳ ದೊಡ್ಡ ಪರಂಪರೆ ಯಿದೆ. ಹಿಮ್ಮೇಳ-ಮುಮ್ಮೇಳಗಳ ಸಾಮರಸ್ಯ, ಕಲೆ-ಕಲಾವಿದರ ಸಾಂಗತ್ಯ, ಸಾಹಿತ್ಯ – ಪೂರಕಾಂಶ ಗಳ ಸಂತುಲನ, ರಂಗಸ್ಥಳ ಮತ್ತು ಪ್ರೇಕ್ಷಕರ ಅರ್ಥಪೂರ್ಣವಾದ ಹೃದಯ ಸಂವಾದಗಳಿದ್ದಾಗ ಮಾತ್ರ ಈಕಲೆಗೆ ಉಜ್ವಲ ಭವಿಷ್ಯವಿದೆ ಎನ್ನುವುದು ಶಂಕರ ದೇವಾಡಿಗರ ಖಚಿತ ಅಭಿಪ್ರಾಯ. ಕೊನೆತನಕ ಕಲಾಸೇವೆಯಲ್ಲಿ ತೊಡಗಿರಬೇಕೆನ್ನುವುದು ಇವರ ಹೃದಯದ ಹಂಬಲ.

ಉಳ್ಳೂರು ಶಂಕರ ದೇವಾಡಿಗ
ಜನನ: ಜೂನ್ 7, 1969
ಜನನ ಸ್ಥಳ: ಉಳ್ಳೂರು ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಕರ್ನಾಟಕ ರಾಜ್ಯ

ಕಲಾಸೇವೆ:

ಮಾರಣಕಟ್ಟೆ, ಶಿರಸಿ, ಬಗ್ವಾಡಿ, ಅಮೃತೇಶ್ವರಿ, ಪೆರ್ಡೂರು, ಸಾಲಿಗ್ರಾಮ ಮೇಳಗಳಲ್ಲಿ 25 ವರ್ಷಗಳಿ೦ದ ಸ್ತ್ರೀವೇಷಧಾರಿಯಾಗಿ ಕಲಾಸೇವೆ.ಕಲಾಸೇವೆಗೆ 25 ವರ್ಷಶಂಕರ ದೇವಾಡಿಗರು ಪ್ರೇಕ್ಷಕರ ಮೆಚ್ಚುಗೆಯ ನುಡಿಗಳೇ ತಮಗೆ ಬಹುದೊಡ್ಡ ಗೌರವ ಎನ್ನುತ್ತಾರೆ. ತನ್ನ ಹುಟ್ಟೂರು ಉಳ್ಳೂರಿನಲ್ಲಿತುಂಬು ಅವಿಭಕ್ತ ಕುಟುಂಬದೊಂದಿಗೆ ಪತ್ನಿ, ಓರ್ವ ಪುತ್ರ ಮತ್ತು ಇಬ್ಬರು ಪುತ್ರಿಯರೊಂದಿಗೆ ಸಂತೃಪ್ತ ಸಂಸಾರಿಯಾಗಿರುವ ಇವರು ಜೂನ್‌ 8ರಂದು 2014ರಲ್ಲಿ ಉಡುಪಿಯ ಪಿ.ಪಿ.ಸಿ. ಸಭಾಂಗಣದಲ್ಲಿ ತನ್ನ ಕಲಾಸೇವೆಯ ರಜತ ಸಂಭ್ರಮದ ಪ್ರಯುಕ್ತ ಸಮ್ಮಾನ ಸ್ವೀಕರಿಸಿದ್ದಾರೆ.

Leave a Reply

Your email address will not be published. Required fields are marked *

Skip to toolbar