
(ಚಿತ್ರ / ವರದಿ : ರೊನಿಡಾ ಮುಂಬಯಿ)
ಮುಂಬಯಿ, ಎ.15: ಕರ್ನಾಟಕ ಮಾಸ್ಟರ್ಸ್ ಅತ್ಲೇಟಿಕ್ ಅಸೋಸಿಯೇಶನ್ ಸಂಸ್ಥೆಯು ದಕ್ಷಿಣ ಕನ್ನಡ ಮಾಸ್ಟರ್ಸ್ ಅತ್ಲೇಟಿಕ್ ಅಸೋಸಿಯೇಶನ್ ಸಹಯೋಗದಲ್ಲಿ ನಾಲ್ಕು ದಿನಗಳ ಇಂಡಿಯನ್ ಮಾಸ್ಟರ್ಸ್ ಅತ್ಲೇಟಿಕ್ಸ್ `38ನೇ ನೇಶನಲ್ ಮಾಸ್ಟರ್ಸ್ ಅತ್ಲೇಟಿಕ್ ಚಾಂಪಿಯನ್ ಶಿಪ್-2018′ ಸ್ಪರ್ಧೆ ಆಯೋಜಿಸಿದೆ.
ಕರ್ನಾಟಕ ರಾಜ್ಯದ ಮಂಗಳೂರು ಅಲ್ಲಿನ ಮಂಗಳಾ ಕ್ರೀಡಾಂಗಣದಲ್ಲಿ ಕಳೆದ ಗುರುವಾರದಿಂದ (ಎ.12) ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ವಿದ್ಯಾಥಿರ್üನಿ ಸುರೇಖಾ ಹೇಮಂತ್ ದೇವಾಡಿಗ ಪಾಲ್ಗೊಂಡಿದ್ದು ಹೈಜಂಪ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ವಿಜೇತರಾಗಿದ್ದಾರೆ.
ಇಂದಿಲ್ಲಿ ಭಾನುವಾರ ಸಮಾಪನಕಂಡ ಸ್ಪರ್ಧೆಯಲ್ಲಿ ಅಥ್ಲೆಟಿಕ್ ಚಾಂಪಿಯನ್ ಶಿಪ್ನಲ್ಲಿ 45 ಪ್ಲಸ್ ಮಹಾರಾಷ್ಟ್ರ ರಾಜ್ಯವನ್ನು ಪ್ರತಿನಿಧಿಸಿದ ಸುರೇಖಾ ದೇವಾಡಿಗ ಅವರು 100 ಮೀಟರ್ ರೀಲೆ ಮತ್ತು 400 ಮೀಟರ್ ರೀಲೆಯಲ್ಲಿ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ತನ್ನದಾಗಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ದೇರೆಬೈಲು ಕೊಂಚಾಡಿ ಮೂಲತಃ ಮುಚ್ಚೂರು ಸುಂದರ ದೇವಾಡಿಗ ಮತ್ತು ಸಿಂಧು ಎಸ್.ದೇವಾಡಿಗ ದಂಪತಿ ಸುಪುತ್ರಿ ಆಗಿರುವ ಸುರೇಖಾ ಸದ್ಯ ಮುಂಬಯಿ ದಾದರ್ ಪಶ್ಚಿಮದ ವರ್ಲಿ ನಿವಾಸಿ ಆಗಿದ್ದಾರೆ. ಮುಂಬಯಿ ವಿವಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಮಾರ್ಗದರ್ಶನದಲ್ಲಿ `ದೇವಾಡಿಗ ಜನಾಂಗದ ಒಂದು ಸಾಂಸ್ಕೃತಿಕ ಅಧ್ಯಯನ’ ಬಗ್ಗೆ ಎಂಫಿಲ್ ಅಧ್ಯಾಯನದಲ್ಲಿದ್ದಾರೆ. ದೇವಾಡಿಗ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಉಪ ಕಾರ್ಯಾದರ್ಶಿ ಆಗಿ ಸೇವಾ ನಿರತರಾಗಿರುವ ಈಕೆ ಓರ್ವ ಪ್ರತಿಭಾನ್ವಿತ ಕ್ರೀಡಾಪಟುವಾಗಿದ್ದಾರೆ.